ಎಂದಿನಂತೆ ಸಾಯಂಕಾಲ ನನ್ನ ಕಚೇರಿಯಿಂದ ಬಸ್ಸಿನಲ್ಲಿ ಬರುವಾಗ ನನಗೆ ಬಸ್ಸಿನಲ್ಲಿ ಏನೋ ವಿಚಿತ್ರವೆನಿಸಿದ್ದಂತೂ ಸತ್ಯ. ಸಾಮಾನ್ಯವಾಗಿ ನಾನು ಬರುವ ಬಸ್ಸಿನಲ್ಲಿ ನಮ್ಮ ಊರಿನವರೇ ಆದ ಒಬ್ಬ ಪರಿಯಚಯಸ್ಥ ನಿರ್ವಾಹಕ ಕಾರ್ಯವನ್ನು ಮಾಡುತ್ತಿರುತ್ತಾರೆ. ಪರಿಚಯವಾದದ್ದು ಬಸ್ಸಿನಲ್ಲಿಯೇ. ಬಸ್ಸು ಜನಭರಿತವಾಗಿದ್ದರೆ ಸ್ವಲ್ಪ, ಇಲ್ಲವಾದರೆ ಅವರೊಂದಿಗೆ ಕುಷಲೋಪಚರಿ ಮಾಡಿಕೊಂಡು ಬಸ್ಸಿನ ಪ್ರಯಾಣ ಮುಂದುವರಿಯುತ್ತದೆ.

 

ವಾರಕ್ಕೊಂದು ರಜೆಯಿರುತ್ತದಲ್ಲಾ, ನನಗೇನೋ  ರವಿವಾರ. ಆದರೆ ಈ ನಿರ್ವಾಹಕರಿಗೆ ಮಾತ್ರ ರಜೆಯಿರುವುದು ಗುರುವಾರ. ಅವರಿಗೆ  ರಜೆಯಾದ್ದರಿಂದ ಬದಲಿ ನಿರ್ವಾಹಕರು ಕಾರ್ಯ ನಿರ್ವಹಿಸುತ್ತಿದ್ದರು. ಬಸ್ ಏರಿದ ಕ್ಷಣದಿಂದಲೇ ಅವರ ವರ್ತನೆಯಲ್ಲಿ ನಾನು ಏನೋ ವಿಚಿತ್ರ ವನ್ನು ಕಂಡೆ. ಸಾಮಾನ್ಯವಾಗಿ  ನಿರ್ವಾಹಕರು ಪ್ರಯಾಣಿಕರಲ್ಲಿ ಮಾತು ಕಡಿಮೆಯೇ ಇರುತ್ತದೆ.  “ಟಿಕೆಟ್. …ಟಿಕೆಟ್…” ಎನ್ನುತ್ತಾರೆ ಬಿಟ್ಟರೆ “ಮುಂದೆ ಬನ್ನಿ ಮುಂದೆ ಬನ್ನಿ” ಎಂದು ಕೇಳಿರುವುದು ಸಾಮಾನ್ಯ, ಸಾಯಂಕಾಲವಾದಂತೆ ಸಿಡುಕು ಸಿಡುಕಾಗಿ ವರ್ತಿಸುವುದು ನಿರ್ವಾಹಕರ ಗುಣಧರ್ಮ. ಆದರೆ ನಾನು ಇಂದು ಕಂಡ ನಿರ್ವಾಹಕರು ವಿಭಿನ್ನ!

 

ಪ್ರಯಾಣಿಕರ ಬಳಿ ಬಂದು “ಟಿಕೆಟ್ ಟಿಕೆಟ್”  ಎನ್ನಲೇ ಇಲ್ಲ! ಮತ್ತೇನಂದರಿಬಹುದು??  ಅವರ ಮಾತು ಕೇಳಿ ನನಗಂತೂ ಹುಬ್ಬೇರಿಸಿಕೊಳ್ಳುವಂತೆ ಮಾಡಿತ್ತು. “ಕಂಡೆಕ್ಟರ್ ಬಂದ್ರು ಮುಖ ನೋಡ್ಕೊಳಿ.. ಯಾವ್ ಯಾವ್ offer ಬೇಕಾದ್ರು ತಗೊಳಿ… ಮಲ್ಕೋಬೇಡಿ… ಸ್ಟೇಡಿಯಂ ಬಂತು…” ಎನ್ನುತ್ತಿದ್ದರು. ಪ್ರತಿ ಬಾರಿಯೂ ಇದೇ ಮಾತು. ನಿಮಗೂ ವಿಚಿತ್ರವೆನಿಸಿರಬಹುದು. ನಗು ಮುಖದಿಂದಲೇ ಎಲ್ಲಾ ಪ್ರಯಾಣಿಕರನ್ನು ಆಕರ್ಷಿಸಿ ತನ್ನತ್ತ ಸೆಳೆಯುತ್ತದ್ದರು. ನಗೆಯ ಅಲೆಯಲ್ಲಿಯೇ ಮುಳುಗಿಸುತ್ತಿದ್ದರು.

 

ಸ್ವಲ್ಪ ಹೊತ್ತಾದ ನಂತರ ನಿರ್ವಾಹಕರಿಂದ ಇನ್ನೂ ಒಂದು ಮಾತಿನ ಚಟಾಕಿ ಬಂತು. “AC ಇದೆ, Fan ಇದೆ ನೋಡಿ ON ಮಾಡ್ಕೊಳಿ…” ಎಂದಾಗ ಇನ್ನೂ ವಿಚಿತ್ರವೆನಿಸಿ ನಾನೂ ನಗಲಾರಂಭಿಸಿದೆ. ಇಡೀ ಬಸ್ಸೇ ನಗಲಾರಂಭಿಸಿತು. ಕಿಟಕಿ ಬಾಗಿಲು ತೆರೆಯಿರಿ ಎನ್ನುವ ಅರ್ಥ ಅವರ ಮಾತಿನಲ್ಲಿ!!! ಆ ಬಸ್ಸು ಸಂಚರಿಸುವ ದಾರಿಯ ಶೇ.75 ರಷ್ಟು ನಾನು ಪ್ರಯಾಣಿಸುತ್ತೇನೆ.  ಎಲ್ಲಿಯೂ ಆ ನಿರ್ವಾಹಕ ಮಾತ್ರ ಕೊಂಚವೂ ಸಿಡುಕಿನ ಮುಖ ಮಾಡಲೇ ಇಲ್ಲ. ಹಸನ್ಮುಖಿಯಾಗಿದ್ದ!

 

ಚಿಲ್ಲರೆ ಇಲ್ಲದಿದ್ದರೂ ತಾನೇ ಚಿಲ್ಲರೆ ಕೊಟ್ಟು “ಅಂಕಲ್/ಆಂಟಿಗೆ ಖುಷಿ ಆಗ್ಬೇಕಲ್ವಾ ಅದಕ್ಕೆ ಚಿಲ್ಲರೆ ಕೊಡೋದು” ಎಂದು ಅವರ ಮುಖದಲ್ಲಿಯೂ ನಗೆ ತರಿಸುತ್ತಿದ್ದರು ಈ ಬದಲಿ ನಿರ್ವಾಹಕ. ಇಂತಹವರು ಇದ್ದಾರಲ್ಲಾ ಎಂದು ಮನಸ್ಸಿನಲ್ಲಿಯೇ ಅಂದುಕೊಂಡು ನನ್ನ ಇಳಿಯುವ ಸ್ಥಳ ಬಂದಾಗ ಬಸ್ಸಿನಿಂದ ಇಳಿದು ಮನೆ ಸೇರಿದೆ.

 

– Jagath Bhat