ಬೆಂಗಳೂರಿನ ಬಸವನಗುಡಿಯ ಹಿರಿಯರು ಕಾಣೆಯಾಗುವುದರಿಂದ ಶುರುವಾಗುವ ಕಥೆ,ನಾವು ಮರೆತಿರುವ ಕಥೆಗಳನ್ನು ನೆನಪಿಸುವ ಕೆಲಸ ಮಾಡುತ್ತದೆ ಅಂದರೆ ನಂಬೋದು ಎಷ್ಟು ಕಷ್ಟ  ಅಲ್ಲವೇ !!ರಾಜ್ ಕುಮಾರ್ ಸಿನಿಮಾ ಬಿಟ್ಟು ಬೇರೆ ಯಾವ ಸಿನಿಮಾ ನೋಡದ ಅಜ್ಜಿ, ನನಗಿಂತ ಮೊದಲು ಈ ಸಿನಿಮಾ ನೋಡಿ ಅದು ಇದು ಅಂದಮೇಲೆ ನೋಡಿದ್ದು ‘ಗೋಧಿ ಬಣ್ಣ,ಸಾಧಾರಣ ಮೈಕಟ್ಟು’.

ನಾನು ಯಾವ ಸೀಮೆಯ ಸಿನಿಮಾ ವಿಮಶ೯ಕಿ ಅಲ್ಲ, ಆದರೆ ಕಥೆಗಳು ಒಮ್ಮೊಮ್ಮೆ ಗಾಢವಾಗಿ ಪರಿಣಾಮ ಬೀರಿ,ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ ನೋಡಿ ! ವೆಂಕೋಬ್ ರಾವ್ ಎಂಬ ಸಾಮಾನ್ಯನ ಕಥೆ,ಬಹುಶಃ ನಮ್ಮ ನಿಮ್ಮ ಮನೆಯಲ್ಲಿನ ಬಹಳ ಸಾಮಾನ್ಯರ ಜೀವನ ನೆನಪಿಸೋದರಲ್ಲಿ ಸಂಶಯ ಇಲ್ಲ. ಅವರು ಹೋದ ನಂತರವೋ,ಕಾಣೆಯಾದ ನಂತರ ಅವರಲ್ಲಿನ ಅಸಮಾನ್ಯ ವ್ಯಕ್ತಿತ್ವ ಕಾಣಿಸುತ್ತದೆ. ನನ್ನ ವಿಷಯದಲ್ಲಿ ಆದ್ದದ್ದು ಇದೇ.

ನನ್ನ ತಾತನೂ ಸಹ ಸಾಮಾನ್ಯರಾಗಿಯೇ ಕಂಡಿದ್ದು. ಕನ್ನಡ ಕಲಿಸುತ್ತಿದ್ದ ರೀತಿ ನೋಡಿ,ಬಹುಶಃ ಕನ್ನಡ ಅಧ್ಯಾಪಕರು ಅಂದುಕೊಂಡಿದ್ದೆ. ಆಫೀಸ್ ಬಗ್ಗೆ ಕೇಳಬೇಕೆಂಬ ಆಸಕ್ತಿ ಬರುವಷ್ಟರಲ್ಲಿ ಮನೆಗೆ ಆಮಂತ್ರಣ ಪತ್ರಿಕೆ, ಪತ್ರಿಕಾ ಅಕಾಡೆಮಿಯಿಂದ ತಾತನಿಗೆ ಪ್ರಶಸ್ತಿ. ಅಂತೂ ತಾತಾ ‘ಪತ್ರಕರ್ತ’ ಅಂತೆಲ್ಲ ತಿಳೀತು. ದಿನ ಪತ್ರಿಕೆ ಓದೋದು,ಕೇಳೋದು “ನೀವು ಹೀಗೆ ಬರೀತಿದ್ರಾ ತಾತ ? ಇದು ತಪ್ಪಲ್ವಾ” ಅಂತ ತಲೆ ತಿಂದು ಚಿಟ್ಟು ಹಿಡಿಸುತ್ತಿದ್ದೆ. ಎಲ್ಲದಕ್ಕೂ ಸಂಯಮದಿಂದಲೇ ಉತ್ತರ ಕೊಡುತ್ತಾ,ನಾನು ಡೊಡ್ಡ ಲೇಖಕಿ ಥರ ಬರೀತ್ತಿದ್ದ ಸಾಲುಗಳು,ಎರಡು ಬೆಟ್ಟಗಳು-ಸೂರ್ಯ-ನದಿ ಚಿತ್ರಗಳು ಇವೆಲ್ಲವನ್ನು ಜೋಪಾನವಾಗಿ ಇಟ್ಟು ಮತ್ತೆ ಸಿಗದಿರೋ ಹಾಗೆ ನೋಡಿ ಕೊಳ್ಳುತ್ತಿದ್ದರು. ಶಾಲೆಯಲ್ಲಿ ಹಾಡಿಗಾಗಿ,ಬರಹಕ್ಕೆ ಏನೇ prize ಬಂದರೂ, ತಾತಾನೇ ಗೆದ್ದಷ್ಟು ಸಂತೋಷ. ಕಲ್ಲು ಸಕ್ಕರೆ ಕೊಟ್ಟು, ಕೆನ್ನೆ ಹಿಂಡಿದರೇ ಅದೇ ಅವತ್ತಿನ ನನ್ನ ಸಾಧನೆ. ಯಾವ ಪುಸ್ತಕ ಕೇಳಳಿ,ಯಾರ ಬಗ್ಗೆ ಕೇಳಿದರೂ ಉತ್ತರಿಸುತ್ತಿದ್ದ ಅವರು ‘ನನ್ನ ವಿಶ್ವಕೋಶ’.

ಕೊಂಚ ಬುದ್ದಿ ಬಂದಮೇಲೆ ಸಂಯುಕ್ತ ಕನಾ೯ಟಕದ ಸುದ್ದಿ ಸಂಪಾದಕರಾಗಿದ್ದರು,ತಾಯಿನಾಡಲ್ಲಿ ಕೆಲಸ ಮಾಡಿದ್ದರು ಎಂದು ತಿಳಿದಾಗ ಆಶ್ಚರ್ಯ! My thaatha was not an ordinary retired old man,ಹಾಗಂತ ತಿಳಿಯೋ ವೇಳೆಗೆ ಅವರು ನನ್ನನ್ನು ಬಿಟ್ಟು ವಾಪಸ್ ಬರದೇರೋ ಜಾಗಕ್ಕೆ ಹೊರಟರು.ಈ ಸಿನಿಮಾದಲಿ ಹೀರೋ ಅಂತಾನೆ, ‘ He was an ordinary man’ ಅಂತ. ಬಹುಶಃ ನಾನು ತಾತನ ಬಗ್ಗೆ ಅದೇ ಅಭಿಪ್ರಾಯ ಇಟ್ಟುಕೊಂಡಿದ್ದೆ. ಅವರು ತೀರಿ ಹೋದ ನಂತರ,ಕಪಾಟಿನಲ್ಲಿ ಕಂಡಿದ್ದು ‘Art By Meghana’ , ‘Written by Meghana’ ಎಂಬ ಬಹಳಷ್ಟು ಹಾಳೆಗಳು,ಪಕ್ಕದಲ್ಲಿ ಸಣ್ಣ ಟಿಪ್ಪಣಿ ಅವರ ಕೈ ಬರಹದ್ದು. ಒಂದು ದಿನವೂ ತಮ್ಮ ಬಗ್ಗೆ ಕೊಚ್ಚಿಕೊಳ್ಳದೇ, ಪಂಚೆ,ಶಟ್೯ ಹಾಕಿಕೊಂಡು ನನ್ನನ್ನೇ ಅಟ್ಟಕೇರಿಸುತ್ತಿದ್ದ ನನ್ನ ತಾತನ್ನ ಹುಡುಕಿ ಕೊಡಿ!

ಆ ಕಪಾಟಿನಲ್ಲಿ ನನ್ನ ಅತ್ತೆಯ ಮೊದಲ ಬರಹ,ಅಪ್ಪನ ಮೊದಲ ಪ್ರಕಟಿತ ಲೇಖನ,ನನ್ನ ಹಾಡಿಗೆ ಬಹುಮಾನ ಬಂದಿದ್ದು ಪತ್ರಿಕೆ ಯಲ್ಲಿ ಬರೆದ್ದಿದ್ದ  ವಿವರ(ದಿನಾಂಕ ಸಮೇತ),ತಾತನ ಡೈರಿ,ಅವರ ಪುಸ್ತಕ, ನೋಟ್ಸ್ ನೋಡಿ ಅವರ ಇನ್ನೊಂದು ಮುಖ ಅನಾವರಣಗೊಂಡಿತ್ತು. ಅವರು ಕೂಡ ಚಿತ್ರ ಬಿಡಿಸುತ್ತಾರೆ,ಅವರಿಗೂ ನೋವು ನಲಿವು,ಸಾಲ ಸೋಲದ ಹೊರೆ, ದುಃಖ ಇತ್ತು. ಅವರೂ ಸಹ ಕ್ರಾಂತಿ ಮಾಡಿದ್ದರು ಇಷ್ಟೆಲ್ಲಾ ತಿಳಿದುಕೊಂಡ ನಾನು ಎಂದಿಗೂ ತಾತನಿಗೆ ಅವರ ಇಷ್ಟ,ಕಷ್ಟ ಕೇಳಲೇ ಇಲ್ಲ ಅಂತ ಬೇಜಾರಾಯಿತು. ಕೆಲವೊಮ್ಮೆ ‘ನಿಮಗೇನು ಗೊತ್ತಾಗತ್ತೆ’ ಎಂಬ ಉದ್ದಟತನದ ಮಾತಾಡಿದ್ದಕ್ಕೆ ನಾಚಿಕೆ ನೂ ಆಗತ್ತೆ. ಪರದೆಯ ಮೇಲಿನ ಪಾತ್ರಗಳು ನನ್ನ ಭಾವನೆಗಳನ್ನು ಕೆರಳಿಸಿ,ಹೊರ ಹಾಕುವ ಮಾಗ೯ ಹುಡುಕೊಹಾಗೆ ಮಾಡಿದವು.ಎಷ್ಟೋ ವಷ೯ಗಳು ಬೇಕಂತಲೇ ಹುದುಗಿಸಿಟ್ಟಿದ್ದ ಭಾವನೆಗಳು ಆಚೆ ಬಂದಾಗ ಏನು ಮಾಡೋದು ತಿಳಿಯುತ್ತಿಲ್ಲ.ತಾತನಿಗೆ ಬರಹದ ಮೂಲಕವೇ ‘ಸ್ಸಾರಿ,ಥ್ಯಾಂಕ್ಸ್’ ಎರಡೂ ಹೇಳಬೇಕಿದೆ.

ಹೀರೋ ಸಿನಿಮಾದಲ್ಲಿ ಹೇಳೋದು “ಒಂದೇ ಒಂದು ಸಾರಿ ನೋಡಬೇಕು ಅಣ್ಣನ್ನ” , ಪ್ರಾಯಶಃ ನಾನು ಇನ್ನೊಂದು ಬಾರಿ ನೋಡಲೇ ಬೇಕು, ಮಾತಾಡಬೇಕು ತಾತನ ಜೊತೆ.