ಏನಿದು ‘ಕನ್ನಡ ಚಳವಳಿ‘! ಯಾರಿಂದ, ಯಾಕಾಗಿ, ಯಾವಾಗ ಆರಂಭವಾದುದು? ಇಂದಿನ ತಲೆಮಾರಿಗಿದು ಯಕ್ಷ ಪ್ರಶ್ನೆಯೇ ಸರಿ. ಅಂದಿನಿಂದ ಇಂದಿನವರೆಗೂ ಅದರ ಹುಟ್ಟು ಬೆಳವಣಿಗೆ ಹಂತಗಳನ್ನು ಕಂಡು, ಕೂಡಿಕೊಂಡು ಬಂದವರಲ್ಲಿ ನಾನೊಬ್ಬನಾದ ಕಾರಣ ನನ್ನ ನೆನಪು, ಅನುಭವಗಳನ್ನಿಲ್ಲಿ ನೀಡುತ್ತಿರುವೆ.

ಕನ್ನಡ ರಾಜ್ಯದ ಉದಯ ೧.೧೧.೧೯೫೬ ಆದರೂ ‘ಕನಾ೯ಟಕ‘ ಎಂದು ಹೆಸರಿಡಲು ಹನ್ನೊಂದು ವಷ೯ ಬೇಕಾಯಿತು. ಆ ದಶಕದಲ್ಲಿದ್ದ ಬಟ್ಟೆ ಗಿರಣಿಗಳು ಅದಾಗ ಆರಂಭಗೊಂಡಿದ್ದ ಸಾವ೯ಜನಿಕ ಉದ್ಯಮದ ವಿಮಾನ, ದೂರವಾಣಿ, ಯಂತ್ರೋಪಕರಣ, ಕೈಗಡಿಯಾರ, ಎಲೆಕ್ಟ್ರಾನಿಕ್ ಕಾಖಾ೯ನೆಗಳಲ್ಲೆಲ್ಲಾ ಹಾಗೂ ವಿಧಾನಸೌಧ ನಿಮಾ೯ಣದಲ್ಲೆಲ್ಲಾ ನೆರೆರಾಜ್ಯದ ಪರಭಾಷಿಕರದೇ ಪ್ರಾಬಲ್ಯ ಪಾರುಪತ್ಯ.

ತಮಿಳುನಾಡಿನ ದ್ರಾವಿಡ ಚಳವಳಿ, ಅಲ್ಲಿನ ಪಕ್ಷ ಸಿದ್ಧಾಂತ, ಭಾಷೆಗಳನ್ನು ಇಲ್ಲೂ ಪ್ರಭಾವಶಾಲಿಯಾಗಿ ಬಿತ್ತಿತ್ತು. ಹಾಗಾಗಿ ರಾಜಧಾನಿ ಬೆಂಗಳೂರಿನ ಕಾಮಿ೯ಕ ಹಾಗೂ ದಂಡು ಪ್ರದೇಶಗಳಲ್ಲಿ ಕನ್ನಡ, ಕನ್ನಡಿಗರ ಕುರಿತು ತಾತ್ಸಾರ, ತಿರಸ್ಕಾರ ತಾಂಡವವಾಡುತ್ತಿತ್ತು. ನಮ್ಮ ಜನರೋ ನಿರಭಿಮಾನಿಗಳಾಗಿ, ನಿಲ೯ಜ್ಜರಾಗಿ ತಮಿಳರ ಉಪಟಳ ಉಪದ್ರವಕ್ಕೆ ಗುರಿಯಾಗಿದ್ದರು. ಅಲ್ಲದೆ ಬ್ರಿಟಿಷರಾಳ್ವಿಕೆಯ ಗುಲಾಮ ಮನೋಭಾವವೂ ಉಳಿದು ಬಂದತ್ತು. ಕನ್ನಡ ಪತ್ರಿಕೆ-ಪುಸ್ತಕ ಓದುವವರಿಲ್ಲ, ಕನ್ನಡ ಚಿತ್ರ ನೋಡುವವರಿಲ್ಲದ ದಾರುಣ ಸ್ಥಿತಿ. ಸಾಲದೆಂಬಂತೆ ಶ್ರೀರಾಮನಮಿ ಸಂದರ್ಭದಲ್ಲಿ ತಿಂಗಳಿಡೀ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮಗಳಲ್ಲೂ ಕನ್ನಡ ಕಲಾವಿದರು-ಕೃತಿಗಳಿಗೆ ಸ್ಥಾನವೇ ಇಲ್ಲ.

ಇಂಥಾ ಸನ್ನಿವೇಶದಲ್ಲಿ ಕನ್ನಡಿಗರ ಜಡತೆ ನೀಗಿಸಿ,ಜಾಗೃತಿ ಮೂಡಿಸಲು ಆರಂಭಗೊಂಡುದೇ ‘ಕನ್ನಡ ಚಳವಳಿ‘. ೨೭.೪.೧೯೬೨ ಅದಕ್ಕೆ ನಾಂದಿ, ಕನ್ನಡ ನಾಡಿನ ಚರಿತ್ರೆಯಲ್ಲಿ ಅದೊಂದು ಚಿರಸ್ಮರಣೀಯ, ಐತಿಹಾಸಿಕ ದಿನ. ಆಗಲೂ – ಈಗಲೂ ರಾಮೋತ್ಸವ ಸಂಗೀತ ಕಛೇರಿಗಳಿಗೆ ಟಿಕೆಟ್ ಮೂಲಕವೇ ಪ್ರವೇಶ ನೀಡುತ್ತಾ ಬರುತ್ತಿರುವ ಒಂದೇ ಒಂದು ಸಂಸ್ಥೆ ಶ್ರೀ ರಾಮ ಸೇವಾ ಮಂಡಲಿ. ಸ್ಥಳೀಯ ಕಲಾವಿದರು – ಕನ್ನಡಕ್ಕೆ ಆದ್ಯತೆ ಪ್ರಾತಿನಿಧ್ಯಕ್ಕಾಗಿ ಸೈಕಲ್ ಸುಬ್ಬರಾಯರ ಕನ್ನಡ ಸಾಹಿತ್ಯ ಕುಟೀರ,ಕೊಣಂದೂರು ಲಿಂಗಪ್ಪನವರ ಕನ್ನಡ ಯುವಜನ ಸಭಾ ಮಾಡಿಕೊಂಡ ಮನವಿ ಎಚ್ಚರಿಕೆಗಳಿಗೆ ಬೇರೆಲ್ಲಾ ಸಂಘ ಸಂಸ್ಥೆಗಳು ಸೂಕ್ತ ಸ್ಪಂದನೆ ನೀಡಿ ತಮ್ಮ ನಿಲುವು ಬದಲಿಸಿಕೊಂಡು ಇಲ್ಲಿನ ಕಲಾವಿದರಿಗೆ ಸಾಕಷ್ಟು ಅವಕಾಶ ಕಲ್ಪಿಸಿಕೊಟ್ಟವು. ಆದರೆ ಮೊ0ಡಾಟ ಭಂಡಾಟ ಮೆರೆದಿದ್ದು ಮಾತ್ರ ಚಾಮರಾಜಪೇಟೆ ಮಂಡಳಿ. ಪರ ಸ್ಥಳದ ಕಲಾವಿದರಿಗೇ ಮಣೆ, ಮನ್ನಣೆ, ಮಾನ್ಯತೆ ಮುಂದುವರಿಸುತ್ತಾ ಬಂದಿತು.

ಈ ಅಸಹನೀಯ ಧೋರಣೆ ವಿರುದ್ಧ ಉಗ್ರವಾಗಿ ಪ್ರತಿಭಟಿಸಲು ನಿರ್ಧರಿಸಿತು,ಕರ್ನಾಟಕ ಸಂಯುಕ್ತ ರಂಗ. ಅದು ೬೦ಕ್ಕೂ ಮೀರಿದ ಕನ್ನಡ ಸಂಘಗಳ ಒಕ್ಕೂಟ. ಕಾದಂಬರಿ ಸಾರ್ವಭೌಮ ಅ.ನ.ಕ್ರೃಷ್ಣರಾಯರು, ಪತ್ರಕರ್ತ-ಪತ್ತೇದಾರಿ ಕಾದಂಬರಿಕಾರ ಮ.ರಾಮಮೂರ್ತಿ ಅದರ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ. ಹಾಗಾಗಿ ಒಂದು ಶಿಸ್ತುಬದ್ಧ ಹೋರಾಟಕ್ಕೆ
ಬೇಕಾದ ಸೈದ್ಧಾಂತಿಕ,ವೈಚಾರಿಕ ನಾಯಕತ್ವ ಅದಕ್ಕಿತ್ತು.

(ಮುಂದುವರಿಯುವುದು)

ಲೇಖಕರ ಪರಿಚಯ
Author photo

ಕೆ. ಹೆಚ್. ನರಸಿಂಹಮೂತ೯ಯವರು ಬಿ.ಎಸ್ಸಿ ಮತ್ತು ಕನ್ನಡ ಎಂ.ಎ ಪದವೀಧರರು. ಕೋರೆಸ್ ನಲ್ಲಿ ಸುಧೀಘ೯ ವೃತ್ತಿ. ೧೯೬೨ರ ಕನ್ನಡದ ಮೊದಲ ಚಳವಳಿಯಿಂದಲೂ ನಾಡು ನುಡಿ ಹೋರಾಟದಲ್ಲಿ ಭಾಗಿ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾಯ೯ದಶಿ೯, ಕನ್ನಡ ಗೆಳೆಯರ ಬಳಗದ ಸಂಚಾಲಕರಾಗಿ ಕಾಯ೯ ನಿವ೯ಹಣೆ. ಕನ್ನಡ ಚಿರಂಜೀವಿ ಪ್ರಶಸ್ತಿ ಹಾಗೂ ಕನ್ನಡ ಹಿರಿಯ ಚಳವಳಿಗಾರ ಪುರಸ್ಕಾರಕ್ಕೆ ಪಾತ್ರರು.