ನಿತ್ಯ ಜೀವನದ ಪ್ರಯಾಣದಲ್ಲಿ ಪ್ರತಿ ಕ್ಷಣವೂ ಹೊಸ ಪರಿಚಯ, ಸ್ನೇಹ, ಪರಿಚಿತರ ಬೀಳ್ಕೊಡುಗೆಯೊಂದಿಗೆ ಸಾಗುತ್ತಿರುತ್ತದೆ. ಯಾವ ಪರಿಚಯ, ಸ್ನೇಹವು ಶಾಶ್ವತವಲ್ಲ. ಮರೆಯುವಂಥದ್ದೂ ಅಲ್ಲ. ಯಾರ ಪ್ರಯಾಣ ಎಂದು ಮುಗಿಯುತ್ತದೆ ಎಂದು ತಿಳಿಯದ ಒಂದು ಸುಂದರ ಪ್ರಯಾಣ ಈ ನಮ್ಮ ಜೀವನ.
ಪ್ರಯಾಣ ಎಂದಾಕ್ಷಣ ಕೇವಲ ಒಂದು ಕ್ರಿಯೆಯಾಗಿ ಉಳಿಯದೆ ನಮ್ಮ ಇರುವಿಕೆ ಇಲ್ಲದಿರುವಿಕೆಯ ವ್ಯತ್ಯಾಸ ತಿಳಿಯದಂತಾದಾಗಬೇಕು. ಅರ್ಥಾತ್ ನಮ್ಮ ಸಾವಿನ ನಂತರವೂ ಜನರ ಮನಸ್ಸಿನಲ್ಲಿ ಜೀವಿಸುವಂತಿರಬೇಕು. ನಮ್ಮ ಹೆಜ್ಜೆ ಗುರುತನ್ನು ಉಳಿಸುವ ಒಂದೇ ಅರ್ಥಬದ್ದ ಜೀವನ ನಮ್ಮದಾದರೆ ಅದು ಒಂದು ಸಾರ್ಥಕ ಜೀವನ ಪ್ರಯಾಣವಾಗುತ್ತದೆ.
ಹೇಗೆ? – ಇದು ಪ್ರತಿ ಮನುಷ್ಯನ ಬುದ್ದಿ, ವಿವೇಚನೆ, ಆಕಾಂಕ್ಷೆಗಳ ಮೇಲೆ ಅವಲಂಬಿತವಾಗಿರುತ್ತದೆ.
ಪ್ರಸ್ತುತ ನಮ್ಮ ಸಮಾಜದಲ್ಲಿ ಸಾಮಾನ್ಯವಾಗಿ ನಮ್ಮ ಜನರು ಹೇಳುವುದು, ನಾಗರೀಕತೆ ಬೆಳೆಯುತ್ತ ಮನುಷ್ಯ ತನ್ನ ಮಾನವೀಯ ಗುಣಗಳನ್ನು ಗಾಳಿಗೆ ತೂರುತ್ತಿದ್ದಾನೆ, ಭಾವನೆಗಳು ನಶಿಸುತ್ತಿವೆ, ಕರ್ತವ್ಯವನ್ನು ಮರೆತು ಯಾಂತ್ರಿಕ ಜೀವನ ನಡೆಸುತ್ತಿದ್ದಾನೆ ಎಂದು. ಆದರೆ ನಮ್ಮ ಸುತ್ತಲೂ ನಡೆಯುವ ಸಂಗತಿಗಳನ್ನು ಗಮನಿಸಿದಾಗ ಮಾತ್ರ ನಮಗೆ ಸತ್ಯದ ಅರಿವಾಗುತ್ತದೆ. ನಾವು ನಮ್ಮ ಜೀವನ ಶೈಲಿಯನ್ನು ಬದಲಿಸಿಕೊಂಡು ಜನರು ಬದಲಾಗುತ್ತಿರುವರೆಂಬುದು ಸರಿಯೇ?
ನಾಗರೀಕತೆಯ ಕಾರಣದಿಂದಾಗಿ ನಮ್ಮ ಜೀವನ ರೀತಿ ಸುಲಭ ಹಾಗು ವೈಜ್ಞಾನಿಕವಾಗಿದೆ. ಜೊತೆಯಲ್ಲಿ ಇನ್ನೂ ಸುಲಭಸಾಧ್ಯ ಮಾಡುವ ಹಂಬಲವು ನಮ್ಮ ಜೀವನದ ಬಿಡುವನ್ನು ತನ್ನ ವಶವಾಗಿಸಿಕೊಂಡಿದೆ. ಆದರೆ ಜೀವನ ತಾನು ಇರುವಂತೆಯೇ ಇದೆ. ಬದಲಾಗಿರುವುದು ಮನಸ್ಸು.
ಯಾವ ಮಾನವೀಯ ಮೌಲ್ಯಗಳು ಕಳೆದು ಹೋಗಿಲ್ಲ. ಅದನ್ನು ನೋಡಲು ಬೆeಕಾದ ದೃಷ್ಟಿ ನಮ್ಮಲ್ಲಿ ಇಲ್ಲ. ಮಕ್ಕಳು ತಮ್ಮ ತಂದೆ ತಾಯಿಯನ್ನು ಆಶ್ರಮಕ್ಕೆ ಬಿಡುತ್ತಾರೆ ಸಾಕಲಾರೆದೆ ಇದು ಸಂಬಂಧಗಳು ಕಳಚುವುದಕ್ಕೆ ಉದಾಹರಣೆ ಆಗುವುದಾದರೆ, ನಮ್ಮ ಸಮಾಜದಲ್ಲಿ ನೊಂದ ತಂದೆ ತಾಯಿಗಳಿಗಾಗಿ ವೃದ್ದಾಶ್ರಮ ನಡೆಸುವವರಲ್ಲಿ ಮಾನವೀಯತೆ ಕಾಣುವುದಿಲ್ಲವೇ? ಅಪಘಾತ ನಡೆದಾಗ ದೂರ ಹೋದವರನ್ನು ದೂಷಿಸುವಲ್ಲಿ ಪಕ್ಕದಲ್ಲೇ ಸಹಾಯ ಮಾಡುವವರು ನಮಗೇಕೆ ಕಾಣುವುದಿಲ್ಲ?
ಮುಂಜಾನೆ ಕವಿದ ಇಬ್ಬನಿ ಇರುವವರೆಗೂ ನಮಗೆ ಕಾಣದ ಹತ್ತಿರದ ವಸ್ತುಗಳನ್ನು ಇಲ್ಲ ಎಂದು ಹೇಳಲಾಗುವುದೇ? ಅದು ತಾತ್ಕಾಲಿಕ. ಬಿಸಿಲು ಬೀಳುವವರೆಗೂ ಮಾತ್ರ. ಕ್ಷಣಿಕ ನಡೆಯುವ ವಿಚಾರವನ್ನು ದೊಡ್ಡ ನಿರ್ಧಾರಗಳಿಗಾಗಿ ಬಳಸಿದಾಗ ಇಂತಹ ಪ್ರಮಾದವಾಗುತ್ತದೆ.
ಪ್ರತಿ ವಸ್ತು ಹಾಗು ಪ್ರತಿ ಘಟನೆಗೂ ನಮಗೆ ನೇರವಾಗಿ ಕಾಣದ ಇನ್ನೊಂದು ಮುಖವಿರುತ್ತದೆ. ಇಂದಿಗೂ ಎಲೆಮರೆಯ ಕಾಯಿಯಂತೆ ಸಮಾಜಕ್ಕೆ ತಮ್ಮ ಕೊಡುಗೆ ನೀಡುವವರು ನಮ್ಮಲ್ಲಿಯೇ ಇದ್ದಾರೆ. ಗುರುತಿಸುವ ವಿವೇಚನೆಯನ್ನು ಕಳೆದುಕೊಳ್ಳುವ ಯಾಂತ್ರಿಕ ಜೀವನದಲ್ಲಿ ನಾವಿದ್ದೇವೆ. ಯಾರು ಕರೆಯದೆಯೇ ಸಹಾಯ ಮಾಡುವವರು ಇಂದಿಗೂ ಇದ್ದಾರೆ. ಆದರೆ ನಾವು ನಮ್ಮ ಕರ್ತವ್ಯದಿಂದ ಹಿನ್ನಡೆದಾಗ ಮುಂದೆ ಚಲಿಸಿದಾಗ ನಮ್ಮ ಹಿಂದೆ ಮಾನವೀಯತೆ ಮೆರೆದವರು ಕಾಣುವುದಿಲ್ಲ. ನಕಾರಾತ್ಮಕ ಭಾವನೆ ಎನ್ನುವುದು ನಮ್ಮ ಮನದಲ್ಲಿ ಹುಟ್ಟಿ ಹೆಮ್ಮರವಾಗಿ ಬೆಳೆದು, ಸಕಾರಾತ್ಮಕ ಸಮಾಜದ ಹಿತವಾದ ವಿಷಯಗಳು ನಮಗೆ ಕಾಣದಂತೆ ಮಾಡಿದೆ. ಸತ್ಯ ಧರ್ಮ, ಪ್ರೀತಿ ವಿಶ್ವಾಸ ಎಲ್ಲ ಕಾಲಕ್ಕೂ ಸಲ್ಲುವ ವಿಷಯಗಳು. ರೀತಿ ಬೇರೆಯಾಗಬಹುದು. ಆದರೆ ಇವೆಲ್ಲವೂ ಪಕೃತಿಯ ನಿಯಮಗಳು.
ನಮ್ಮ ಸಮಾಜ ಜಾಗೃತವಾಗಿದೆ. ಕರ್ತವ್ಯಗಳ ಅರಿವು ಹೆಚ್ಚುತ್ತಿದೆ. ವಿಷಯದ ಆಳಕ್ಕೆ ಇಳಿದು ಸತ್ಯ ತಿಳಿಯುವ ಜ್ಞಾನ ನಮ್ಮಲ್ಲಿ ಮೂಡಿದೆ. ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಎಲ್ಲ ಜ್ಞಾನವು ನಮ್ಮಲ್ಲಿ ಹೆಚ್ಚುತ್ತಿದೆ. ಆದ್ರೆ ಮನದ ಕಣ್ಣು ತೆರೆದಾಗ ಸುಲಭ ಜೀವನ, ಆಧುನಿಕ ಜೀವನ ಶೈಲಿಯ ಜೊತೆಗೆ ಮಾನವೀಯತೆಯನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಒಂದು ಸುಂದರ ನಾಡು ನಮಗೆ ಕಾಣುತ್ತದೆ.
ದ್ರಾಕ್ಷಿ ಸಿಗದ ನರಿ ಹಣ್ಣು ಹುಳಿ ಎಂದ ಹಾಗೆ, ಮನದ ಕಣ್ಣು ತೆರೆಯದೆ ನಾಗರೀಕತೆಯನ್ನು ದೂಷಿಸುವ ನಮ್ಮ ನಿಲುವು ಬದಲಾಗಬೇಕಿದೆ. ಮಾನವೀಯ ಮೌಲ್ಯಗಳನ್ನು ಜೀವಂತವಾಗಿಡುವಲ್ಲಿ ನಮ್ಮ ಪಾತ್ರ ದೊಡ್ಡದಾಗಿದೆ. ಅದನ್ನರಿತು ಸುಂದರ ಸ್ವಸ್ಥ ಕುಟುಂಬ, ಸಮಾಜ, ನಾಡು, ದೇಶ ಕಟ್ಟುವಲ್ಲಿ ಪ್ರಯತ್ನಿಸೋಣ.
– ಸಮತ ಎಸ್. ಪಿ.