ಬೆಂಗಳೂರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಹೆಸರಿದೆ. IT city ಎಂಬ ನಾಮಧೇಯದಿಂದ ವಿಶ್ವವಿಖ್ಯಾತಿಯನ್ನು ಪಡೆದಿದೆ. silicon city, garden city, cool city ಅಬ್ಬಾ ಇಷ್ಟೊಂದು ಹೆಸರಿನಿಂದ ಪ್ರಜ್ವಲಿಸುತ್ತಿದೆ. ಸ್ವಲ್ಪ ದಿನಗಳ ಹಿಂದೆ garbage city ಎಂದು ಅಂತರಾಷ್ಟ್ರೀಯ ಕುಖ್ಯಾತಿಯನ್ನೂ ಪಡೆದಿತ್ತು. ಅದೆಷ್ಟು ಜನಕ್ಕೆ ಕೆಲಸ ಕೊಟ್ಟು ಸಲಹುತ್ತಿದೆ ಈ ಬೆಂಗಳೂರು. ಇಲ್ಲಿನ ಜನಸಂಖ್ಯೆ ಸುಮಾರು ಒಂದು ಕೋಟಿ ದಾಟಿದೆ. ಈ ಬೆಂಗಳೂರು ದೇಶದ IT ರಾಜಧಾನಿ. ಈ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಬೀರಿದೆ. ಇದರೊಂದಿಗೆ ಬೆಂಗಳೂರಿಗೆ traffic city ಎನ್ನುವ ಕುಖ್ಯಾತಿಯ ನಾಮಫಲಕವೂ ಇದೆ. ಇದಕ್ಕೆ ಕಾರಣಗಳು ಪರಿಹಾರ ಮಾರ್ಗೋಪಾಯಗಳನ್ನು ನಾವೇ ಕಂಡುಕೊಂಡು ನಮ್ಮನ್ನು ಸಾಕಿ ಸಲಹುತ್ತಿರುವ
ಈ ನಗರದ ಅಭಿವೃದ್ಧಿಗೆ ಶ್ರಮಿಸಬೇಕು. ಅದು ಕರ್ತವ್ಯ ಕೂಡ. ಸಂಚಾರಿ ದಟ್ಟಣೆಯ ಸಮಸ್ಯೆಯಲ್ಲಿ ದೆಹಲಿಯ ನಂತರದ ಅಂದರೆ ದೇಶದಲ್ಲಿಯೇ ಎರಡನಯ ಸ್ಥಾನವನ್ನು ಪಡೆದಿದೆ. ಇದೀಗ ಬೆಂಗಳೂರಿನಲ್ಲಿ ಸಂಚಾರ ದಟ್ಟನೆಯ ಸಮಸ್ಯೆ ಎಷ್ಟೆಂದರೆ ದಿನನಿತ್ಯ ಸಂಚರಿಸುತ್ತಿರುವ ಪ್ರಯಾಣಿಕರೇ ಬಲ್ಲರು..!!! ದಿನನಿತ್ಯ ನಾವು ಈ ಸಮಸ್ಯೆಯ ಬಗ್ಗೆ ಮಾತನಾಡುತ್ತಿದ್ದೇವೆಯೇ ಹೊರತು ಅದನ್ನು ಪರಿಹರಿಸುವತ್ತ ಚಿಂತಿಸುತ್ತಿಲ್ಲ. ಕಾರಣಗಳು ಹಲವಾರು. ಆದರೆ ನಾವೇ ಇದಕ್ಕೆ ಪ್ರಮುಖ ಕಾರಣವೆಂಬುವುದು ಮರೆಯಬಾರದು.. ಕೇವಲ ಸರಕಾರ ಮತ್ತು ಸಂಚಾರಿ ಪೋಲೀಸರನ್ನು ಹೊಣೆಯಾಗಿಸುವುದು ತಪ್ಪು. ಇನ್ನೂ ಹೆಚ್ಚಿನ ಅಭಿವೃದ್ಧಿಗಾಗಿ ಶ್ರಮಿಸೋಣ.
ಕೆಲವೊಂದು ಕಾರಣಗಳು :
೧. ಮೊದಲನೇಯ ಕಾರಣವೆಂದರೆ ಅದು ನಾವೇ ( ಬೆಂಗಳೂರಿನಲ್ಲಿ ವಾಸಿಸುವ ನಾಗರೀಕರು) ಅಂದರೆ ನಮ್ಮ ಜೀವನ ಶೈಲಿ
೨.ಕಿರಿದಾದ ಮತ್ತು ಕಳಪೆ ಗುಣಮಟ್ಟದ ರಸ್ತೆಗಳು. ಅತಿಯಾಗಿ ರಸ್ತೆಯನ್ನು ಅತಿಕ್ರಮಿಸಿಕೊಂಡಿರುವುದು.
೩. ಉದ್ಯೋಗವನ್ನು ಅರಸಿ ವಲಸೆ ಬರುವವರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಮಿತಿಯಿಲ್ಲದೆ ಏರುತ್ತಿರುವುದು.
೪.ಯೋಜನಾ ಶೈಲಿಯಲ್ಲಿ ಶಿಸ್ತು ಬದ್ಧವಾದ ಅಭಿವೃದ್ಧಿಯಾಗದೇ ಇರುವುದು..
೫. ಉದ್ಯೋಗದ ಸೃಷ್ಟಿಗಾಗಿ ಕೇವಲ ಒಂದೇ ನಗರವನ್ನು (ಬೆಂಗಳೂರು) ಉತ್ತೇಜಿಸಿರುವುದು ಮತ್ತು ಬೆಳೆಸುತ್ತಿರುವುದು
೬. ಅಶಿಸ್ತಿನ ವಾಹನ ಚಾಲನೆ
೭. ಹೊರರಾಜ್ಯದ ವಾಹನಗಳ ಸಂಚಾರಕ್ಕೆ ಕಡಿವಾಣವೇ ಇಲ್ಲದಿರುವುದು.
೮. ಸುಲಭ ಸಾಲದ ಸೌಲಭ್ಯದಿಂದ ಪ್ರತಿಯೊಬ್ಬನೂ ವಾಹನವನ್ನು ತನ್ನದಾಗಿಸಿಕೊಳ್ಳುತ್ತಿರುವುದು.
೯. ಸರಿಯಾದ ನಿರ್ವಹಣೆಯಿಲ್ಲದೆ ಕೆಟ್ಟು ನಿಲ್ಲುತ್ತಿರುವ ಸಿಗ್ನಲ್ ಗಳು.
೧೦. ರಸ್ತೆ ಮಧ್ಯೆಯೇ ಕೆಟ್ಟು ನಿಲ್ಲುತ್ತಿರುವ ವಾಹನಗಳು. ಇದರಲ್ಲಿ ಹೆಚ್ಚಿನ ಪಾಲು ಬಿ.ಎಂ.ಟಿ.ಸಿ. ಬಸ್ಸುಗಳು ಮತ್ತು ಲಾರಿಗಳದ್ದೇ ಸ್ಥಾನ.
೧೧. ಪೋಲೀಸರ ಅಶಿಸ್ತಿನ ವರ್ತನೆ ಮತ್ತು ಅತಿಯಾದ ಲಂಚದ ಹಾವಳಿ
ಈ ಸಂಚಾರಿ ದಟ್ಟಣೆಗೆ ನಮ್ಮಿಂದಲೇ ಪರಿಹಾರ ದೊರಕಬೇಕು… ಕೇವಲ ಸರಕಾರ ಮತ್ತು ಸಂಚಾರಿ ಪೋಲೀಸರನ್ನು ಹೊಣೆಯಾಗಿಸುವುದು ತಪ್ಪು… ಇಲ್ಲಿ ಸೂಚಿಸಿರುವ ಪ್ರಮುಖ ಮಾರ್ಗೋಪಾಯಗಳನ್ನು ಪಾಲಿಸಿದರೆ ಬೆಂಗಳೂರಿಗೆ ಅಂಟಿಕೊಂಡಿರುವ ಸಂಚಾರಿ ಸಮಸ್ಯೆಯನ್ನು ದೂರಮಾಡಬಹುದು…ಇದು ಕೇವಲ ಬೆಂಗಳೂರಿಗೆ ಸೀಮಿತವಾದದ್ದಲ್ಲ. ಭವಿಷ್ಯದಲ್ಲಿ ಸಂಚಾರಿ ದಟ್ಟಣೆ ಹೆಚ್ಚಲಿರುವ ನಗರಗಳಿಗೂ ಅನ್ವಯಿಸುತ್ತದೆ. ಅಂತಹ ನಗರಗಳು ಈಗಲೇ ಇಲ್ಲಿ ಸೂಚಿಸಿದ ಮಾರ್ಗೋಪಾಯಗಳನ್ನು ಪಾಲಿಸಿದರೆ ಮುಂದೆ ತಲೆದೋರಲಿರುವ ಸಮಸ್ಯೆಗಳನ್ನು ಈಗಿನಿಂದಲೇ ದೂರಮಾಡಬಹುದು…
ಕೆಲವೊಂದು ಪರಿಹಾರಗಳು :
೧. ಕೆಲವೊಂದು ಸಿಗ್ನಲ್ ಗಳನ್ನು ಆಯ್ಕೆ ಮಾಡಬೇಕು ಅಲ್ಲಿ ಸಂಚರಿಸುವ ಖಾಸಗಿ ವಾಹನಗಳಲ್ಲಿ ಕನಿಷ್ಠ ೪ ಜನ ಪ್ರಯಾಣಿಸಬೇಕು. ಇದಕ್ಕಿಂತ ಕಡಿಮೆ ಜನ
ಕಂಡು ಬಂದಲ್ಲಿ ದಂಡ ವಿಧಿಸಬೇಕು. ಇದಕ್ಕಾಗಿ ಕಟ್ಟುನಿಟ್ಟಿನ ಆದೇಶ ತರಬೇಕು.
೨. ಪ್ರಯಾಣಿಕರು ಬಿ.ಎಂ.ಟಿ.ಸಿ. ಬಸ್ಸಿನ ಅಥವಾ ಸಾರ್ವಜನಿಕ ವಾಹನಗಳಲ್ಲಿನ ಪ್ರಯಾಣವನ್ನು ಉತ್ತೇಜಿಸಬೇಕು. ಇದಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕ ವಾಹನಗಳನ್ನು ರಸ್ತೆಗಿಳಿಸಬೇಕು..
೩. ಹೆಚ್ಚು ಸಂಚಾರಿ ಸಮಸ್ಯೆ ಇರುವಂತಹ ರಸ್ತೆಯಲ್ಲಿ ಟೋಲ್ ಸಂಗ್ರಹ ಮಾಡಬೇಕು. ಇದರಿಂದ ರಸ್ತೆಯಲ್ಲಿ ಖಾಸಗಿ ವಾಹನಗಳ ಸಂಖ್ಯೆ ಇಳಿಮುಖವಾಗುತ್ತದೆ ಮತ್ತು ಎಲ್ಲಾ ಜನರು ಬಿ.ಎಂ.ಟಿ.ಸಿ ಅಥವಾ ಸಾರ್ವಜನಿಕ ವಾಹನಗಳನ್ನೇ ಅವಲಂಭಿಸುತ್ತಾರೆ. ರಸ್ತೆಯ ಗುಣಮಟ್ಟವು ಚೆನ್ನಾಗಿರುತ್ತದೆ ಮತ್ತು ಅದರ ನಿರ್ವಹಣಾ ವೆಚ್ಚವು ಇಳಿಮುಖವಾಗುತ್ತದೆ. ಜನರು ಸ್ವಲ್ಪ ಅಹಂ ಭಾವ ಬಿಟ್ಟು ಬಸ್ಸು ಮತ್ತು ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣ ಮಾಡಬೇಕು. ಬಸ್ಸು ಪ್ರಯಾಣದಿಂದ ತಮ್ಮ ಘನತೆಗೆ ಧಕ್ಕೆ ಉಂಟಾಗುತ್ತದೆಯೇ ? ಇಲ್ಲ. ಇದರಿಂದ ಹೆಚ್ಚು ವಾಹನಗಳು ರಸ್ತೆಗಿಳಿಯದೆ ಟ್ರಾಫಿಕ್ ಸಮಸ್ಯೆ, ಇಂಧನ ದರ , ಬಳಕೆ ಮತ್ತು ಪರಿಸರ ಮಾಲಿನ್ಯವೂ ಇಳಿಮುಖವಾಗುತ್ತದೆ. ಶಾಲಾ ಕಾಲೇಜು, ಕಛೇರಿಗಳಿಗೆ ನಿಗದಿತ ಸಮಯಕ್ಕೆ ತಲುಪಬಹುದು.
೪. ಮನಸ್ಸಿಗೆ ಬಂದಂತೆ ವಾಹನ ನಿಲುಗಡೆಯನ್ನು ನಿಲ್ಲಿಸಬೇಕು.
೫. ಕೆಲವೊಂದು ಸಿಗ್ನಲ್ ಆಯ್ಕೆ ಮಾಡಿ ವೇಗ ಮಿತಿ ನಿಗದಿಪಡಿಸಬೇಕು. ಮನಬಂದಂತೆ ಅಂದರೆ ಅಡ್ಡದಿಡ್ಡಿ ವಾಹನ ಚಾಲನೆಗೆ ದಂಡ ವಿಧಿಸಬೇಕು. ಇದರಿಂದ ರಸ್ತೆ ಅಪಘಾತಗಳೂ ಇಳಿಮುಖವಾಗುತ್ತದೆ
೬. ರಸ್ತೆ ಅತಿಕ್ರಮಣ ನಿಲ್ಲಿಸಬೇಕು. ಕಟ್ಟುನಿಟ್ಟಿನ ಆದೇಶ ಜಾರಿಗೆ ತರಬೇಕು.
೭. ಸಾಧ್ಯವಾದರೆ ಒಂದು ನಿರ್ದಿಷ್ಟ ಅವಧಿಯವರೆಗೆ ಬೆಂಗಳೂರಿನಲ್ಲಿ ಮಾತ್ರ ನೂತನ ವಾಹನ ನೋಂದಾವಣೆ ನಿಲ್ಲಿಸಬೇಕು.
೮. ಎಲ್ಲಾ ಕಛೇರಿ ಮತ್ತು ಶಾಲಾ ಕಾಲೇಜುಗಳ ಸಮಯ ಬದಲಾವಣೆ ಮಾಡಬೇಕು. ನಿರ್ದಿಷ್ಟ ಪ್ರದೇಶಕ್ಕೆ ಅನುಗುಣವಾಗಿ ಸಮಯ ನಿಗದಿಪಡಿಸಬೇಕು.
೯ . ಅಂತರ ರಾಜ್ಯ ನೋಂದಾವಣೆಯಾದ ವಾಹನಗಳ ಬೆಂಗಳೂರು ಪ್ರವೇಶದ ಬಗ್ಗೆ ನಿಗಾ ಇಡಬೇಕು. ತೆರಿಗೆ ಪಾವತಿಸುವುದು ಇನ್ನೊಂದು ರಾಜ್ಯದಲ್ಲಿ . ಸಂಚರಿಸುವುದು ಮಾತ್ರ ಬೆಂಗಳೂರಿನಲ್ಲಿ ….. !!!!!
೧೦. ಈ ಎಲ್ಲಾ ಸೂತ್ರಗಳನ್ನು ಜಾರಿಗೆ ತರುವಂತಹ ದಕ್ಷ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು.
ಇದರಲ್ಲಿ ಮೊದಲ ಎರಡು ಸೂತ್ರಗಳನ್ನು ಜಾರಿಗೆ ತಂದರೂ ಭಾರೀ ಸಂಚಾರಿ ಸಮಸ್ಯೆಗೆ ಪರಿಹಾರ ದೊರಕುವುದು ಖಂಡಿತ . ಒಂದುವೇಳೆ ಎಲ್ಲಾ ಈ ಸೂತ್ರಗಳನ್ನು ಜಾರಿಗೆ ತಂದರೆ ಬೆಂಗಳೂರಿನಲ್ಲಿ ಸಂಚಾರಿ ಸಮಸ್ಯೆಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ದೊರಕುತ್ತದೆ. ಈ ಪರಿಹಾರದಿಂದ ಇಷ್ಟೆಲ್ಲಾ ಉಪಯೋಗ ಆಗುತ್ತದೆ ಎಂದರೆ ನಾವೇಕೆ ಇದರ ಬಗ್ಗೆ ಒಲವು ತೋರಬಾರದು ?? ‘ಮನಸಿದ್ದರೆ ಮಾರ್ಗವಿದೆ’. ಊರು ಬದಲಾಗುತಿದ್ದಂತೆ ಸಮಸ್ಯೆಗಳು ಬಂದೇ ಬರುತ್ತದೆ. !!! ಎಲ್ಲಾ ಸಮಸ್ಯೆಗಳಿಗೂ ಪರಿಹಾರವೂ ಇದ್ದೇ ಇದೆ. ಆದರೆ ದೊಡ್ಡದು ಚಿಕ್ಕದೆಂಬ ವ್ಯತ್ಯಾಸವಿರುತ್ತದೆ ಅಷ್ಟೇ. ಪ್ರಜ್ಞಾವಂತರಾದ ನಾವು ಪರಿಹಾರ ಕಂಡುಕೊಳ್ಳಬೇಕು. ಎಲ್ಲಾ ಸಮಸ್ಯೆಗಳಿಗೆ ಸರಕಾರಕ್ಕೆ ಬೆರಳು ತೋರಿಸಬಾರದು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ನಮ್ಮ ಪಾತ್ರವೂ ಮಹತ್ವದ್ದಾಗಿದೆ. ಇದನ್ನು ನಾವು ಅರಿತರೆ ತುಂಬಾ ಒಳ್ಳೆಯದಲ್ಲವೇ? ಈ ಪರಿಹಾರ ಉಪಯೋಗಳನ್ನು ಓದಿದ ನಂತರ ಕೆಲವರು ಕೊಂಕು ಮಾತನಾಡುವವರು ಇರುತ್ತಾರೆ. ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳಬಾರದು.
ಬೆಂಗಳೂರು ಜನರ ಸಹಕಾರ ಬೇಕಾಗಿದೆ ಅಷ್ಟೇ.
-Jagath Bhat.
About the author: Mentor/blogger Kannada gottilla team.
native of Puttur, an engineer by profession, loves writing and Photography.