ಇವರೂ ಬೇಟೆಗಾರರೇ…

ಈ ಬೇಟೆಗಾರರು ಪ್ರಾಣಿ, ಪಕ್ಷಿ ಕ್ರಿಮಿ ಕೀಟಗಳನ್ನಲ್ಲದೇ ಮಾನವರನ್ನು ಬೇಟೆಯಾಡುತ್ತಾರೆ…!!! ಬೇಟೆಯಾಡುವ ಸ್ಥಳ ಕಾಡು ಮಾತ್ರವಲ್ಲ ನಾಡು ಕೂಡ.!!! ಕೆಲವರು ನಾಡಿನಲ್ಲಿ ಮಾನವರನ್ನೇ ಗುರಿಯಾಗಿಸಿ ಬೇಟೆಯಾಡಿದರೆ ಇನ್ನೂ ಕೆಲವರು ಪ್ರಾಣಿ ಪಕ್ಷಿಗಳನ್ನೇ ಬೇಟೆಯಾಡುತ್ತಾರೆ… ಆದರೂ ಈ ಬೇಟೆಗಾರರಿಂದ ಯಾವುದೇ ಪ್ರಾಣ ಹರಣವಾಗುವುದಿಲ್ಲ !!! ಇದು ಇವರ ಹವ್ಯಾಸವಂತೂ ಅಲ್ಲವೇ ಅಲ್ಲ… ಇವರ ವೃತ್ತಿಯೇ ಬೇಟೆಯಾಡುವುದು.!!! ಕೆಲವು ಬೇಟೆಯು ಮೊದಲೇ ನಿಗಧಿಯಾಗಿರಬಹುದು ಆದರೆ ಇನ್ನೂ ಕೆಲವು ಮೊದಲೇ ನಿಗಧಿಯಾಗಿರುವುದಿಲ್ಲ. ಎಷ್ಟೇ ಹೊತ್ತಿಗೂ ಸೂಚನೆ ಬಂದಾಕ್ಷಣ ಬೇಟೆಯಾಡಲು ಹಗಲು ರಾತ್ರಿಯೆನ್ನದೆ ಮತ್ತು ಬೇಟೆಯ ಸ್ಥಳವು ಎಷ್ಟೇ ದುರ್ಗಮ ಪ್ರದೇಶವಾಗಿದ್ದಾರೂ ಸಿದ್ಧರಾಗಿ ತೆರಳಲೇಬೇಕು.!!! ತಮ್ಮ ಸ್ವಂತ ( ಊಟ ನಿದ್ದೆ) ಆಸೆಗಳನ್ನೆಲ್ಲಾ ಬದಿಗಿಟ್ಟು ಬೇಟೆಯಾಡಲೇಬೇಕಾದಂತಹ ಪರಿಸ್ಥಿತಿ ಇವರದ್ದಾಗಿದೆ. ಇವರ ಈ ಬೇಟೆಗೆ ಮಾಸಾಂತ್ಯದಲ್ಲಿ ಸರಿಯಾದ ವೇತನವೂ ದೊರೆಯುತ್ತದೆ. ಇವರ ಬೇಟೆಯ ವೃತ್ತಿಗೆ ಅಧಿಕೃತ ಪರವಾನಿಗೆಯೂ ಇದೆ. ಇವರಾಡಿದ ಬೇಟೆಗೆ ಪ್ರಶಂಸೆಗಳೊಂದಿಗೆ ಹಲವಾರು ಪ್ರಶಸ್ತಿಗಳ ಮಹಾಪೂರವೇ ಹರಿದುಬರುತ್ತದೆ… ಕೆಲವೊಮ್ಮೆ ಇವರ ಬೇಟೆಯ ಬಗ್ಗೆ ಒಳ್ಳೆಯ ಅಭಿಪ್ರಾಯ ಸಿಗದೇ ಇರಬಹುದು. ಕೆಲವೊಮ್ಮೆ ಇವರಾಡಿದ ಬೇಟೆಯಿಂದ ಭಾರೀ ಸಂಚಲನವನ್ನು ಸೃಷ್ಟಿಸುತ್ತದೆ.!!! ನಮ್ಮ ತಂಡವೇ ಮೊದಲು ಬೇಟೆಯಾಡಬೇಕೆಂಬ ಹಂಬಲ ಇವರದ್ದಾಗಿರುತ್ತದೆ… ಪ್ರತಿದಿನವೂ ಎಲ್ಲಾ ಸುದ್ದಿ ಮಾಧ್ಯಮಗಳಲ್ಲಿ ಇವರು ಬೇಟೆಯಾಡಿದ ಸುದ್ದಿಯೇ ಪ್ರಸಾರವಾಗುತ್ತದೆ… ಕೆಲವೊಮ್ಮೆ ಯಾರಿಗೂ ತಿಳಿಯದಂತೆ ಬೇಟೆಯಾಡಿ ಉತ್ತಮ ಸಮಾಜದ ನಿರ್ಮಾಣದಲ್ಲಿ ಸಹಕಾರಿಯಾಗುತ್ತಾರೆ….

ಇಷ್ಟೊಂದು ಹೇಳಿದಾದ ಆಶ್ಚರ್ಯವಾಗುವುದರ ಜೊತೆಗೆ ಹಲವು ಕುತೂಹಲಕಾರಿ ಪ್ರಶ್ನೆಗಳು ಕಾಡಬಹುದು. ಹಾಗಿದ್ದರೆ ನಾನಿಲ್ಲಿ ಹೇಳುವಂತಹ ಈ ಬೇಟೆಗಾರರು ಯಾರು? ಹೇಗಿರಬಹುದು? ಎಲ್ಲಿರಬಹುದು? ಹೇಗೆ ಬೇಟೆಯಾಡುತ್ತಾರೆ? ಯಾವುದನ್ನು ಬೇಟೆಯಾಡುತ್ತಾರೆ? ಬೇಟೆಯಾಡಲು ಬಳಸುವ ಶಸ್ತ್ರವೇನು? ಮತ್ತು ಎಲ್ಲಿ ಬೇಟೆಯಾಡುತ್ತಾರೆ? ಏನಿರಬಹುದು…? ಪ್ರಾಣಹರಣವಿಲ್ಲದ ಬೇಟೆಯೆಂದರೆ ಏನು?… ಈ ಬೇಟೆಗಾರರು ಮಾನವರೇ. ಅದರಲ್ಲಿ ಸಂಶಯವೇ ಬೇಡ. ತಂಡೋಪತಂಡವಾಗಿ ಬೇಟೆಯಾಡುತ್ತಾರೆ.. ನಮ್ಮ ನಿಮ್ಮಂತೆಯೇ ಸಹಜರಾಗಿರುತ್ತಾರೆ ಈ ಬೇಟೆಗಾರರು ಬೇಟೆಯಾಡದಿದ್ದರೆ ಸುದ್ದಿ ಮಾಧ್ಯಮಗಳೇ ಸ್ತಬ್ಧವಾಗುತ್ತದೆ!!! ಆದರೂ ಇವರು ಯಾರು ಎಂಬ ಪ್ರಶ್ನೆ… ಈ ಬೇಟೆಗಾರರು ನಮ್ಮ ನಿಮ್ಮ ಮಿತ್ರರಾದಂತಹ ಮಾಧ್ಯಮ ‘ವರದಿಗಾರರು ಮತ್ತು ಛಾಯಾಗ್ರಾಹಕರು’ ಇವರು ದೈನಂದಿನ ಸುದ್ದಿ ಬೇಟೆಗಾರರು.. ಇವರ ಒಂದೊಂದು ತಂಡದಲ್ಲಿ ಸುಮಾರು ೪ ರಿಂದ ೫ ಜನರಿರುತ್ತಾರೆ. ಮೊದಲೇ ತಿಳಿಸಿದಂತೆ ಎಲ್ಲೆಂದರಲ್ಲಿ ಹೊತ್ತಲ್ಲದ ಹೊತ್ತಲ್ಲಿ ಸುದ್ದಿಯ ಬೇಟೆಯ ಸೂಚನೆಗಾಗಿ ಕಾದು ಸುದ್ದಿಯನ್ನು ಬೆನ್ನಟ್ಟಿ ಸೆರೆಹಿಡಿಯುತ್ತಾರೆ… ಇದುವೇ ಇವರ ದೈನಂದಿನ ಅಧಿಕೃತ ಕಾಯಕ. ಇವರಾಡಿದ ಬೇಟೆಯನ್ನೇ ವಾಹಿನಿಗಳಲ್ಲಿ ಅಥವಾ ಪತ್ರಿಕೆಗಳಲ್ಲಿ ಸ್ವಲ್ಪ ಸಂಸ್ಕರಿಸಿ ಶೃಂಗರಿಸಿ ಪ್ರಸಾರ ಮಾಡುತ್ತಾರೆ.. ಅದು ಎಂತಹುದೇ ಸುದ್ದಿಯಿರಲಿ ಎಷ್ಟೇ ಕಷ್ಟಪಟ್ಟಾದರೂ ತಮ್ಮ ಶಸ್ತ್ರವಾದ ಕ್ಯಾಮರಾದಲ್ಲೇ ಸೆರೆಹಿಡಿದು ತಮ್ಮ ಸುದ್ದಿ ಸಂಸ್ಥೆಯಲ್ಲೇ ಪ್ರಸಾರ ಮಾಡಬೇಕೆಂಬ ಹಂಬಲಿಸಿ ಸುದ್ದಿಯ ಬೇಟೆಗಾಗಿ ತುದಿಗಾಲಲ್ಲಿ ನಿಂತಿರುತ್ತಾರೆ.. ಎಷ್ಟು ಕಷ್ಟ ಪಟ್ಟು ಸುದ್ದಿಗಳನ್ನು ಸೆರೆಹಿಡಿಯುತ್ತಾರೋ ಅವರೇ ಬಲ್ಲರು. ಬೆಳಗ್ಗಿನಿಂದಲೂ ರಾತ್ರಿಯವರೆಗೂ ಎಲ್ಲೆಂದರಲ್ಲಿ ಸಂಚರಿಸಿ ಯಾವುದೋ ಘಟನೆಯ ಸುದ್ದಿಯನ್ನು ಬೇಟೆಯಾಡಿ ವಾಹಿನಿ ಅಥವಾ ಪತ್ರಿಕೆಯ ಮೂಲಕ ನಮ್ಮ ನಿಮ್ಮೆಲ್ಲರನ್ನು ತಲುಪಿಸುವ ಕೆಲಸ ಮಾಡುತ್ತಲೇ ಇರುತ್ತಾರೆ . ಅಪಾಯಕಾರಿ ಕೆಲಸಕ್ಕೂ ಇಳಿಯುತ್ತಾರೆ. ಭ್ರಷ್ಟಾಚಾರವೇ ಇರಲಿ ಗೂಂಡಾಗಳ ಅನಧಿಕೃತ ವಿಷಯವೇ ಇರಬಹುದು. ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುತ್ತಾರೆ. ಕೆಲಮೊಮ್ಮೆ ಪ್ರಾಣವನ್ನು ಕಳೆದುಕೊಂಡ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇದೆ. ಯಾವ ಭಧ್ರತೆಯೂ ಇಲ್ಲದೆ ನಿರ್ಭಯವಾಗಿ ಕಾರ್ಯಾಚರಣೆ ಮಾಡುತ್ತಾರೆ. ಇವರಲ್ಲಿ ಪುರುಷರು ಅಥವಾ ಸ್ತ್ರೀಯರು ಎನ್ನುವ ಭೇದವಿಲ್ಲದೆ ಕೆಲಸಗಳಲ್ಲಿ ಭಾಗಿಯಾಗಿರುತ್ತಾರೆ. ದಿನದ 24ಗಂಟೆಯೂ ಕಾರ್ಯಾಚರಿಸುವ ಕೆಲವೇ ಕೆಲವು ಸಂಸ್ಥೆ ಗಳಲ್ಲಿ ಇವರೂ ಸೇರಿರುತ್ತಾರೆ. ಸೈನಿಕರಿಗೂ ಇವರಿಗೂ ವ್ಯತ್ಯಾಸ ಆಯುಧವೊಂದೇ… ಸೈನಿಕರಲ್ಲಿ ಗನ್ ಇರುತ್ತದೆ ಅದರೆ ಈ ಕಾರ್ಯ ತಂಡದಲ್ಲಿ ಕ್ಯಾಮರಾ ಇರುತ್ತದೆ.

ನಿಜಕ್ಕೂ ಇವರ ಕಾರ್ಯವನ್ನು ನಾವು ಶ್ಲಾಘಸಲೇ ಬೇಕು.

 

– ಜಗತ್ ಭಟ್

Shopping Cart
Scroll to Top