MYಸೂರು.. ನನ್ನ ತವರೂರು

ಹುಟ್ಟೂರು, ಮೈಸೂರು. ಹುಟ್ಟಿ, ಬೆಳೆದು, ಓದಿ, ಒಟ್ಟೂ ಇಪ್ಪತ್ತೆರಡು ವರ್ಷಗಳ ತವರೂರ ನಂಟು ಎಂಬ ಭದ್ರ ಬುನಾದಿಯ ಮೇಲೆ ನಿಂತ ಸಂಬಂಧವಿದು. ನಾಲ್ಕು ವರ್ಷಗಳ ಹಿಂದೆ ನೌಕರಿಯ ನಿಮಿತ್ತ ಬೆಂಗಳೂರಿಗೆ ವಲಸೆ ಬಂದರೂ, ಎಲ್ಲ ಮೈಸೂರಿಗರಂತೆ ‘ನನ್ನಷ್ಟು ಮೈಸೂರನ್ನು ಪ್ರೀತಿಸುವವರೇ ಇಲ್ಲ’ವೆಂಬ ಭ್ರಮೆಯ ಮುಗ್ಧ ಮದ.

ಕೆಲವು ತಿಂಗಳ ಹಿಂದಷ್ಟೇ ನಾವು ಮೈಸೂರಿನಲ್ಲಿ ವಾಸವಿದ್ದ ಮನೆಯನ್ನು ತೊರೆದು ಬರುವಾಗ ಎಂಥದೋ ಅನಾಥಭಾವ ಆವರಿಸಿ ಮನಸ್ಸು ಮ್ಲಾನಗೊಂಡಿತ್ತು. ಎಲ್ಲಿ ಹೋದರೂ ಇರುವುದೊಂದೇ ಭೂಮಿ ಎಂದು ಮಾನವ ಜಗತ್ತಿನ ತಾರತಮ್ಯಗಳನ್ನು ಮೀರಿ ನಿಲ್ಲಲು ಅರಿಯಬೇಕಿರುವ ಸತ್ಯವಾದರೂ, ‘ನನ್ನೂರು ಇದು’ ಎನ್ನುವ ಈ ಗ್ರಸ್ತತೆ ಭಾವನಾತ್ಮಕವಾದುದು, ಹಾಗಾಗಿ ಇದು ಯಾವುದೇ ಹಾನಿಯುಂಟುಮಾಡದ ಅಭಿಮಾನ.

ಇತ್ತೀಚೆಗೆ ಮೈಸೂರಿಗೆ ಹೋಗದೇ ಎರಡು ತಿಂಗಳುಗಳೇ ಸರಿದುಹೋಗಿದ್ದವು. ‘ಭಿತ್ತಿ’ ಎಂಬ ಭೈರಪ್ಪನವರ ಆತ್ಮಚರಿತ್ರೆ ಓದುವಾಗ ಕಳೆದವಾರ ಕಾಡುತ್ತಿದ್ದ ಅನೇಕ ವಿಷಯಗಳಲ್ಲಿ, ಅವರಿಗೂ ಮೈಸೂರಿನ ಮೇಲಿರುವ ಒಲವೂ ಒಂದು. ‘ಮೈಸೂರು ಅಂದಿಗೂ, ಇಂದಿಗೂ ಸೌಮ್ಯವಾದ ನಗರ’ ಎಂದು ಒಂದು ಕಡೆ ಬರೆಯತ್ತಾರೆ ಭೈರಪ್ಪ. ಪುಸ್ತಕವನ್ನು ಓದಿಮುಗಿಸಿದ ಮೇಲೆ ಮೈಸೂರನ್ನು ನೋಡಲೇಬೇಕೆಂದು ಕಳೆದ ವಾರಾಂತ್ಯ ಹೊರಟೇಬಿಟ್ಟೆ.

ಮೈಸೂರಿನ ಬಗ್ಗೆ ಅಧಿಕೃತವಾಗಿ, ವಿಸ್ತಾರವಾಗಿ, ಸೂಕ್ಷ್ಮ ವಿವರಗಳ ಸಹಿತ ನಾನೆಂದೂ ಬರೆದವಳಲ್ಲ. ಕವಿತೆಯ ಗೀಳು ಹಿಡಿಸಿಕೊಂಡದ್ದರಿಂದ ಆಗಾಗ ನನ್ನೂರಿನ ಆಪ್ತ ಜಾಗಗಳ ಬಗ್ಗೆ ಕವನಗಳನ್ನು ಬರೆದಿದ್ದಿದೆ. ಮೊದಲ ಬಾರಿ ಇಂಥ ಸಾಹಸಕ್ಕೆ ಕೈಹಾಕಲು ಸ್ನೇಹಿತರು ಪ್ರೀತಿಯಿಂದ ಒತ್ತಾಯಿಸಿದ್ದರು ಎಂಬ ಜಾಣ ಕಾರಣದ ಜೊತೆಗೆ ಪ್ರವಾಸ ಕಥನಗಳನ್ನು ಇನ್ನು ಮುಂದೆ ಜತನದಿಂದ ಬರೆಯಬೇಕೆಂಬ ತೀವ್ರವಾದ ವಯಕ್ತಿಕ ತುಡಿತಕ್ಕೆ ಸೋತು ಮಾಡುತ್ತಿರುವ ಪ್ರಯತ್ನವಿದು.

ಶನಿವಾರ ನಸುಕಿಗೇ ಆತ್ಮೀಯ ಗೆಳೆಯನೊಡನೆ ಮೈಸೂರ ಕಡೆಗೆ ಪ್ರಯಾಣ ಆರಂಭಿಸಿದೆ. ಇಂಥವೇ ಜಾಗಗಳಿಗೆ ಇಂತಿಷ್ಟೇ ಸಮಯಕ್ಕೆ ಭೇಟಿಕೊಡಬೇಕೆಂಬ ನಿರ್ದಿಷ್ಟ ಯೋಜನೆ, ಪೂರ್ವಸಿದ್ಧತೆ ಮಾಡಿಕೊಂಡು ಎಂದೂ ಪ್ರವಾಸ ಕೈಗೊಳ್ಳುವ ಜಾಯಮಾನ ನಮ್ಮದಲ್ಲ. ಆ ಕ್ಷಣಕ್ಕೆ ಮನಸ್ಥಿತಿ, ಪರಿಸ್ಥಿತಿ ಎಲ್ಲಿಗೆ ಸಹಜವಾಗಿ ಎಳೆದೊಯ್ಯುತ್ತದೋ ಅಲ್ಲೆಲ್ಲಾ ಯಾವುದೇ ಅಚಲ ಗುರಿಯಿಲ್ಲದೆ ತಿರುಗಾಡುವುದು ರೂಢಿ.

ಮೈಸೂರು ತಲುಪುತ್ತಲೇ ಸ್ನೇಹಿತನನ್ನು ಕಾರಂಜಿ ಕೆರೆಗೆ ಸಬರ್ಬನ್ ಬಸ್ ಸ್ಟ್ಯಾಂಡ್ ನಿಂದ ‘ಪ್ರೀಪೇಡ್ ಆಟೋ’ ಬಾಡಿಗೆಗೆ ಪಡೆದು ಕಳುಹಿಸಿ ನಾನು ಭೈರಪ್ಪನವರ ಕುವೆಂಪುನಗರದ ನಿವಾಸದ ಕಡೆ ಹೊರಟೆ. ಅವರನ್ನು ಭೆಟ್ಟಿಯಾಗಿ ನಮಸ್ಕರಿಸಿ ಅವರ ಪುಸ್ತಕಗಳು ಹೇಗೆ ನನ್ನನ್ನು ಜೀವನದ ವಿವಿಧ ಕಾಲಘಟ್ಟಗಳಲ್ಲಿ ಪೋಷಿಸಿವೆ ಎಂದು ಹೇಳಿಬರಬೇಕಿತ್ತಷ್ಟೇ. ಆದರೆ ಅವರು ಮನೆಯಲ್ಲಿಲ್ಲವೆಂದು ಬಾಗಿಲು ತೆರೆದ ಅವರ ಧರ್ಮಪತ್ನಿ ಸರಸ್ವತಿಯವರು ಹೇಳಿದರು. ತೀರಾ ಬೇಸರವಾದರೂ ಅವರಿಗೆ ನಮಸ್ಕರಿಸಿ ಹೊರನಡೆದೆ.

ಗೆಳೆಯನಿಗೆ ಕರೆಮಾಡಿ, ಮಧ್ಯಾಹ್ನ ರೆಸ್ಟೊರಾ ಒಂದರಲ್ಲಿ ಒಟ್ಟಿಗೆ ಊಟ ಮುಗಿಸಿ ಸಂಜೆ ನಾಲ್ಕರ ಹೊತ್ತಿಗೆ ಕುಕ್ಕರಹಳ್ಳಿ ಕೆರೆಗೆ ಹೊರಟೆವು. ದಾರಿಯಲ್ಲಿ ನನಗೆ ತುಂಬಾ ಇಷ್ಟವಾಗುವ ಚಾಮರಾಜ ವೃತ್ತವನ್ನು ಒಂದು ಸಲ ಪ್ರದಕ್ಷಿಣೆ ಹಾಕಿದೆವು. ನಂತರ ಕೃಷ್ಣರಾಜ ವೃತ್ತ ಮತ್ತು ಸಯ್ಯಾಜಿರಾವ್ ರಸ್ತೆಗಳಲ್ಲಿ ಸ್ವಲ್ಪ ಹೊತ್ತು ಅಡ್ಡಾಡಿ, ದೊಡ್ಡ ಗಡಿಯಾರ-ಚಿಕ್ಕ ಗಡಿಯಾರಗಳ ಬಗ್ಗೆ, ಮಾರ್ಕೆಟ್ ಬಗ್ಗೆ ಒಂದಷ್ಟು ಮಾತನಾಡಿ ಮುಂದುವರಿದೆವು.

ಸೃಷ್ಟಿ ಸೌಂದರ್ಯದ ಯಾವುದೇ ಆಯಾಮವನ್ನು, ಭೌತಿಕವಾಗಿಯಾಗಲೀ, ಆಧ್ಯಾತ್ಮಿಕವಾಗಿಯಾಗಲೀ, ಭಾವನಾತ್ಮಕವಾಗಿಯಾಗಲೀ, ಕಡೆಗೆ ವಸ್ತುನಿಷ್ಠವಾಗಿಯಾಗಲೀ, ಅನುಭವ-ಅನುಭೂತಿಗಳ ಆಳಕ್ಕೆ ಹೊಕ್ಕು ಸ್ವಚ್ಛಂದವಾಗಿ, ನಿರಾಳವಾಗಿ ವಿಹರಿಸುವುದು ಗೆಳೆಯನಿಗೆ ಹೊಸತಲ್ಲ. ಅಲ್ಲದೇ ಹಕ್ಕಿ, ಕ್ರಿಮಿ-ಕೀಟಗಳ ಬಗ್ಗೆ ವಿಶೇಷ ಒಲವುಳ್ಳ ಅವನಿಗೆ, ಛಾಯಾಗ್ರಹಣಕ್ಕೂ ಅವಕಾಶ ದೊರಕಿಸಿಕೊಡಬಹುದಾದ ಜಾಗ ಅದು ಎಂದು ನಿರ್ಧರಿಸಿದೆ. ಅಂತೆಯೇ ಅಲ್ಲಿ ಇಬ್ಬರೂ ಸಂಜೆ 7:30 ಯವರೆಗೂ ಕಳೆದುಹೋಗಿದ್ದೆವು.

ಒಬ್ಬರ ಏಕಾಂತ ಮತ್ತೊಬ್ಬರದ್ದನ್ನು ಭಂಗಮಾಡದೇ ಪೂರಕವಾಗಿರುವುದು ಅನಾಮಿಕರಾಗಿ, ಅಲೆಮಾರಿಗಳಾಗಿ ಸಂಚರಿಸುವಾಗ ಅಗತ್ಯವೆಂದು ಇಬ್ಬರಿಗೂ ಅರಿವಿತ್ತು.

ಹೋದ ಮೊದಲ ಒಂದೂವರೆ ಘಂಟೆ ಕುಕ್ಕರಹಳ್ಳಿ ಕೆರೆ ಸಂಜೆಯ ಬೆಳಕಿನಷ್ಟೇ ಪ್ರಖರವಾಗಿ ತಾನೂ ಸ್ಪಷ್ಟವಾಗಿ, ತಿಳಿತಿಳಿಯಾಗಿ ಎಂದಿನಂತೆ ಸಮಚಿತ್ತವಾಗಿತ್ತು. ಗೊಂದಲದ ಗೂಡಾದ ಮನಸ್ಸಿಗೆ ಚಿಕಿತ್ಸಕ ನೋಟವದು, ಸಾಂತ್ವನ ತರುವ ನಿಲುವು, ಕೆರೆಯದು. ಸ್ವಲ್ಪಹೊತ್ತಿನಲ್ಲೇ ಕೆರೆಯ ಅನವರತ ಮೊರೆಯೊಂದನೇನೋ ಆಲಿಸಿ ಉತ್ತಿರಸಲು ಅವಸರಿಸುವಂತೆ, ಅದುವರೆಗೂ ಚದುರಿಹೋಗಿದ್ದ ಮೋಡಗಳು, ಇದ್ದಕ್ಕಿದ್ದಂತೆ ಒಂದರೊಳಗೊಂದು ಕಲಸಿಹೋಗಿ, ಗೆಲುವಾಗಿದ್ದ ಆಗಸ ಕ್ಷಣಗಳಲ್ಲಿ ನಿರ್ವಿಣ್ಣವಾಯಿತು. ಪಟಪಟನೆ ಹನಿಗಳುದುರಲು ಶುರುವಾದರೂ ಕೆರೆಯ ಏರಿಯಲ್ಲೇ ಮರವೊಂದರ ಕೆಳಗೆ ನಾವಿಬ್ಬರೂ ಕೂತೆವು. ಎಲ್ಲೋ ಹುಟ್ಟಿದ ಬಿಂದುವೊಂದರಿಂದ ಕಿರಿದಲೆಗಳೇಳುತ್ತ ನಸುನಗುತ್ತಿದ್ದ ಕೆರೆಯ ಮೇಲೀಗ ಅವೇ ಶಾಂತ ಅಲೆಗಳೂ ಒಂದರೊಳಗೊಂದು ಬೆರೆತೂ ಬೆರೆತೇ ಮರೆಯಾಗತೊಡಗಿದವು. ಕೆಳಗೆ ಎಲ್ಲವೂ ಒದ್ದೆ ಮುದ್ದು ಹಸಿರು, ಮೇಲೆ ತನಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ಹರಡಿಕೊಂಡ ನಿರಾಸಕ್ತ ಗಗನ.

ಇನ್ನೂ ಸ್ವಲ್ಪ ಹೊತ್ತಾದ ಮೇಲೆ ಇಡೀ ಪ್ರಪಂಚ ನೀಲವರ್ಣದಲ್ಲಿ ತೊಯ್ದು ನವೀನನಗ್ನತೆಯೊಂದ ಮೆರೆವಂತೆ ಕರಗುತ್ತಲಿತ್ತು. ಮೌನವಾಗಿ ಎದ್ದು ಮರಗಳ ಮೇಲ್ಕಾಪಿನಿಂದ ತುಸುದೂರ ನಡೆದಮೇಲೆ ನೀಲಿ ತಿಳಿಯಾಗಿ ಅರ್ಧಚಂದ್ರನ ಬೆಳಕು ಮಸುಕಾಗೇ, ಅಸ್ಪಷ್ಟವಾಗೇ ಕನಸಿನಂತೆ ನಮ್ಮ ಸುತ್ತಲ ಜಗತ್ತನ್ನು ಯಕಃಶ್ಚಿತ್ ಭ್ರಮೆಯೇನೋ ಅನಿಸಿಬಿಡುವಂತೆ ಚೆಲ್ಲುತ್ತಿತ್ತು. ಮಾನಸಗಂಗೋತ್ರಿಯ ಕಡೆಗಿರುವ ನಿರ್ಗಮನದಿಂದ ಹೊರನಡೆದು ದಾರಿಯಲ್ಲಿ ಸಿಕ್ಕ ಕೆಲವು ದೊಡ್ಡ ದೊಡ್ಡ ಮರಗಳನ್ನು ತಬ್ಬುತ್ತಾ ನಮ್ಮ ನಮ್ಮ ದಾರಿ ಹಿಡಿದೆವು.

ದೊಡ್ಡಮ್ಮನ ಮನೆಯಲ್ಲಿ ಅಕ್ಕರೆಯ ತಂಗಿಯ ಒಡನಾಟ ವಿಚಿತ್ರ ನಿರ್ಲಿಪ್ತತೆಯಲ್ಲಿ ಮುಳುಗಿದ್ದ ಮನಸ್ಸಿಗೆ ಹೊಸ ಹುರುಪು ತಂದಿತು. ಬಹಳ ಹೊತ್ತು ಒಬ್ಬರನ್ನೊಬ್ಬರು ಎಂದಿನಂತೆ ಛೇಡಿಸುತ್ತಾ, ನಮ್ಮ ನಗು ರಾತ್ರಿಯ ಕತ್ತಲಲ್ಲಿ ಮಾರ್ದನಿಸಿ ಕರಗಿಹೋಗುವವರೆಗೂ ಎಚ್ಚರವಿದ್ದು ನಂತರ ನಿದಿರೆಗೆ ಜಾರಿದೆವು.

ಮರುದಿನ ಅದೇ ಮಾನಸಗಂಗೋತ್ರಿಯಲ್ಲಿ ಗೆಳೆಯನನ್ನು ಭೇಟಿಯಾಗಿ ಒಳಗಿನ ದಾರಿಗಳಲ್ಲಿ ನಡೆಯತೊಡಗಿದೆ. ಭಾನುವಾರವಾದ್ದರಿಂದ ಇಡೀ ಮಾನಸಗಂಗೋತ್ರಿ ಎಂದಿಗಿಂತಲೂ ಮತ್ತೂ ಪ್ರಶಾಂತವಾಗಿತ್ತು. ಗೊತ್ತುಗುರಿಯಿಲ್ಲದ ಬಡಪಾಯಿಗಳಂತೆ ಅಡ್ಡಾಡುತ್ತಾ ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ ವಿಭಾಗದ ಕಡೆ ನಡೆದು ಬಂದೆವು, ಎದುರಿಗೆ ರೇಷ್ಮೆಹುಳು ಸಾಕಣೆಯ ಕೇಂದ್ರ!

ಹಳ್ಳಿಯ ಜೀವನದ ನಿಕಟ ಪರಿಚಯವಿರುವ ನನಗೆ, ನನ್ನ ತಂದೆಯ ಊರಿನಲ್ಲಿ ವ್ಯವಸಾಯ ಬಿಟ್ಟರೆ ಜನರು ತೊಡಗಿದ್ದುದು ರೇಷ್ಮೆಕೃಷಿಯಲ್ಲಿ ಎಂಬ ಎಲ್ಲ ವಿವರಗಳೂ ಒಮ್ಮೆಗೇ ನೆನಪಾದವು. ನನ್ನ ಮೊದಲ ಪುಸ್ತಕ ಆಂಗ್ಲಭಾಷೆಯಲ್ಲಿದ್ದು, ಅದರ ಶೀರ್ಷಿಕೆ ‘ಸಿಲ್ಕ್ ವರ್ಮ್ ಸ್ಲಂಬರ್ಸ್’ ಎಂದಿದೆ.

ಇಷ್ಟರಲ್ಲಿ ನಮ್ಮ ದೃಷ್ಟಿಗೆ ಬಿದ್ದದ್ದು ಸುಮಾರು ಕಾಲು ಎಕರೆ ಹಿಡಿಯುವಷ್ಟು ವಿಶಾಲವಾಗಿ ಹರಡಿದ್ದ ಬಹು ಎತ್ತರದ ಆಲದಮರ. ತಪಸ್ಸಿಗೆ ಕೂರುವಂತೆ, ಧ್ಯಾನದಲ್ಲಿ ಮುಳುಗಿಹೋಗಲು ಜಾಗ ಹುಡುಕುವವರಿಗೆ ಆ ಸ್ಥಳ ತೋರಿಸಿದರೆ ಪದೇ ಪದೇ ಹುಡುಕಿಕೊಂಡು ಹೋಗುವುದು ಖಚಿತ. ನಮ್ಮ ಪುಣ್ಯಕ್ಕೆ ಅಲ್ಲಿ ಯಾರೂ ಇರಲಿಲ್ಲ.

ಸುಮಾರು ಒಂದೂವರೆ ಘಂಟೆಗೂ ಮೀರಿ ಅವನೆಲ್ಲೋ ನಾನೆಲ್ಲೋ ಮೌನವಾಗಿ ಕುಳಿತಿದ್ದೆವು. ಹಿಂದಿನ ಸಂಜೆ ಮಳೆಬಂದು ಹಾದಹಾಗಿದ್ದ ಹಸಿನೆಲದ ಮೇಲೆ ಹಸಿರು ಚಿಗುರು ಮೆತ್ತನೆಯ ಹಾಸಿಗೆಯಂತೆ ಹರಡಿತ್ತು. ನಾನು ಗಗನಮುಖಿಯಾಗಿ ಭೂಮಿಗೆ ಬೆನ್ನು ಕೊಟ್ಟು ಮಲಗಿದೆ. ಹಕ್ಕಿಗಳ ಮುಂಜಾವಿನ ಕಲರವ ಅವುಗಳ ತಪಸ್ಸಿನಂತೆ, ಅವುಗಳದ್ದೇ ಪ್ರಾರ್ಥನೆಯಂತೆ ಇಲ್ಲಿ ನಮ್ಮ ಮನಸ್ಸನ್ನು ಹಿತವಾಗಿ ಕಲಕುತ್ತಿತ್ತು.

ನಂತರ ಹೇಗೋ ರೇಷ್ಮೆಹುಳು ಸಾಕಣೆಯ ಕೇಂದ್ರಕ್ಕೆ ಭೇಟಿಕೊಟ್ಟು ಅಲ್ಲಿದ್ದ ಎಂ. ಎಸ್ಸಿ. ವಿದ್ಯಾರ್ಥಿಗಳ ಜೊತೆ ರೇಷ್ಮೆಹುಳುಗಳ ವಿವಿಧ ತಳಿಗಳ ಬಗ್ಗೆ ತಿಳಿದುಕೊಂಡೆವು. ಅಲ್ಲಿ ಚಂದ್ರಿಕೆಗಳೂ ಇದ್ದವು ಮತ್ತು ಅಷ್ಟು ತಳಿಗಳಿವೆ ಎಂಬುದೂ ನನಗೆ ಗೊತ್ತಿರಲಿಲ್ಲವಾದ್ದರಿಂದ ಕುತೂಹಲ ಕೆರಳಿ ಮನಸ್ಸು ಮಗುವಿನಂತಾಗಿತ್ತು, ಮತ್ತೆ ವಿದ್ಯಾರ್ಥಿಯಾಗಿ ಅಧ್ಯಯನದಲ್ಲಿ ತೊಡಗಬೇಕೆನಿಸುತಿತ್ತು. ಕಡೆಗೆ ಮನಸ್ಸಿಲ್ಲದ ಮನಸ್ಸಿನಿಂದ ಅಲ್ಲಿಂದ ಹೊರಟೆವು, ಬೆಂಗಳೂರಿಗೆ ಬೇಗ ಬಂದು ತಲುಪುವುದಿತ್ತು.

ಆಲದ ಮರದ ಮೇಲೆ ಬಂದು ಕೂತ ಇಂಡಿಯನ್ ಗ್ರೇ ಹಾರ್ನ್‌ಬಿಲ್ ಹಕ್ಕಿಜೋಡಿಯನ್ನು ತನ್ನ ಕ್ಯಾಮರದಲ್ಲಿ ಸೆರೆಹಿಡಿದಿದ್ದ ಗೆಳೆಯನೂ ಆ ನಸುಕಿನ ವಿಶಿಷ್ಟ ಅಸ್ಪಷ್ಟತೆಯನ್ನು ಅರಿತವನಂತೆ ಹೊರಡಲು ಅಣಿಯಾದ. ಮರದ ಕೆಳಗೆಲ್ಲಾ ಬರಿಗಾಲಲ್ಲಿ ನಡೆಯುತ್ತಿದ್ದ ನಾನು ಮತ್ತೆ ಪಾದರಕ್ಷೆ ಧರಿಸುವಾಗ ಒಮ್ಮೆ ನಿಟ್ಟುಸಿರಿಟ್ಟು ನನ್ನ ಅಸ್ಪಷ್ಟ ಆಲೋಚನೆಗಳಿಗೊಂದು ಶೃತಿ ಹೊಂದಿಸಲು ಹವಣಿಸುತ್ತಿದ್ದೆ.

ಹುಟ್ಟೂರು-ತವರೂರೆಂಬ ಮೈಸೂರು, ಅನ್ನದ ದಾರಿ ಕಾಣಿಸುತ್ತಿರುವ ಬೆಂಗಳೂರು, ನಿಷ್ಕಾರಣ ಬೆಳೆದು ಹೆಮ್ಮರವಾದ ಮಲೆನಾಡಿನ ಬಗೆಗಿನ ಪ್ರೀತಿ… ಅತ್ತ ಇಡೀ ಅವನಿಯನ್ನು ಕೈಕಾಲು ಗಟ್ಟಿಇರುವವರೆಗೂ ಅಲೆದು ಅರಿತೇ ತೀರಬೇಕೆಂಬ ಸಹಕಾಲಿಕ ದುಸ್ತರ ಹಾಗೂ ಸಮ್ಮೋಹಕ ತುಡಿತ. ಹೀಗೆಲ್ಲಾ ಯೋಚಿಸುತ್ತಾ ಅಲ್ಲಿಂದ ಜೋಳಿಗೆಯನ್ನು ಹೆಗಲೇರಿಸಿ ಹೊರಟು ಬೆಂಗಳೂರ ಕಡೆಗೆ ಹೊರಡುತ್ತಿದ್ದ ಬಸ್ಸೊಂದನ್ನು ಹತ್ತಿ ಕೂತೆವು.

ಏನಿದು ಈ ಕರುಳಸಂಬಂಧಗಳು ಮತ್ತು ಅಜ್ಞಾತದ ನಡುವಲ್ಲೆಲ್ಲೋ ಸಿಕ್ಕಿಕೊಂಡು ಹೊಯ್ದಾಡುತ್ತಿರುವ ಭಾವ? ಎಂಬ ಪ್ರಶ್ನೆ ತಲೆಯ ಹೊಕ್ಕಿನಿಂತಿತ್ತು. ಬಸ್ಸು ಗಾಳಿಯ ಸೀಳಿಕೊಂಡು ನನ್ನ ತವರೂರ ಅಗಲಿ ಹೊಸಜೀವನ ನೀಡಿರುವ ಮಾಯಾನಗರಿಯೊಂದರ ಕಡೆಗೆ ಚಲಿಸಿತ್ತು. ಕಣ್ಣಾಲಿಗಳು ಆರ್ದ್ರಗೊಂಡಿದ್ದವು. ನಿದ್ರೆ ಹತ್ತಿದಂತೆ ನಟಿಸಿ ಕಣ್ಮುಚ್ಚಿದೆ.

– Sourabha Rao

1 thought on “MYಸೂರು.. ನನ್ನ ತವರೂರು”

  1. Nice write up…ಹೌದು ಮೈಸೂರು ಯಾವಾಗಲೂ ಹೀಗೆ ಪದೇಪದೇ ಕಾಡುತ್ತದೆ.

Comments are closed.

Shopping Cart
Scroll to Top